ಎನ್‍ಸಿನ
	1468-1529. ಸ್ಪೇನಿನ ಒಬ್ಬ ಕವಿ, ಸಂಗೀತಗಾರ, ಪ್ರಪ್ರಥಮ ನಾಟಕಕಾರರಲ್ಲೊಬ್ಬ. ನಿಬ್ರಿಜ ಎಂಬ ಸುಪ್ರಸಿದ್ಧ ಭಾಷಾಶಾಸ್ತ್ರಜ್ಞನ ಬಳಿ ವಿದ್ಯಾಭ್ಯಾಸ ನಡೆಸಿ, ಡ್ಯೂಕ್ ಆಫ್ ಆಲ್ಬ ಎಂಬ ಶ್ರೀಮಂತನ ಆಶ್ರಯ ಪಡೆದ. ಈತ ಬರೆದ ನಾಟಕಗಳನ್ನು ಮೊದಲ ಭಾರಿ ಆಲ್ಬನ ಅರಮನೆಯಲ್ಲಿ ಅಭಿನಯಿಸಲಾಯಿತು. ಸ್ವಂತ ಶ್ರಮ ಹಾಗೂ ಸಾಧನೆಯ ಫಲವಾಗಿ ಲಿಯಾನ್ ಎಂಬಲ್ಲಿನ ಚರ್ಚಿನ ಧಾರ್ಮಿಕಮಂಡಲಿಯ ಸದಸ್ಯತ್ವ ದೊರಕಿಸಿಕೊಂಡ. 1496ರಲ್ಲಿ ಈತ ರಚಿಸಿದ ಕ್ಯಾನ್ಸಿಯಾನೆರೊ ಎಂಬ ಉದ್ಗ್ರಂಥದಲ್ಲಿ ಕಾವ್ಯಕಲೆಯನ್ನು ಕುರಿತ ಪ್ರಬಂಧ, ಕೆಲವು ಉತ್ತಮ ಭಾವಗೀತೆಗಳು, ಸಾಂಪ್ರದಾಯಿಕವಾದ ನೀಳ್ಗವನಗಳು, ಧಾರ್ಮಿಕ ಹಾಗೂ ಅನೀತಿಯುತವಾದ ಎಂಟು ನಾಟಕಗಳೂ ಸೇರಿವೆ. ಈ ನಾಟಕಗಳಲ್ಲಿ ವಾಸ್ತವಿಕತೆ ಇದೆ. ಭಾಷೆ ಸುಂದರ ಹಾಗೂ ಸರಳ. ರೋಮ್ ಹಾಗೂ ಸಾಲಮಾಂಕ ನಗರಗಳಲ್ಲಿ ಅಭಿನಯಿಸಲಾದ ಇವನ ಹಲವು ನಾಟಕಗಳು ಫರ್ನಾಂಡೆಸ್ ವಿಸೆಂಟ್, ಟೊರೆಸ್ ನಹರೋ ಮುಂತಾದ ಇತರ ನಾಟಕಕಾರರ ಮೇಲೆ ಪ್ರಭಾವ ಬೀರಿದವೆನ್ನುತ್ತಾರೆ. ಒಳ್ಳೆಯ ಸಂಗೀತಗಾರನಾಗಿದ್ದ ಈತ ಹಲವು ಸೊಗಸಾದ ಕಲಾತ್ಮಕವಾದ ಗೀತಗಳನ್ನು ರಚಿಸಿದ್ದಾನೆ.  		
(ಎಚ್.ಕೆ.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ